ಇಂಗ್ಲೆಂಡಿನ ಒಂದು ಕೌಂಟಿ. 14 ಜಿಲ್ಲೆಗಳನ್ನೊಳ ಗೊಂಡಿದೆ. ಇಂಗ್ಲೆಂಡಿನ ವಾಯವ್ಯಕ್ಕಿರುವ ಈ ಕೌಂಟಿಯ ವಿಸ್ತೀರ್ಣ 2897 ಚ.ಕಿಮೀ. ಜನಸಂಖ್ಯೆ 11,36,300. ಉತ್ತರಕ್ಕೆ ಕುಂಬ್ರಿಯ, ಪೂರ್ವಕ್ಕೆ ಉತ್ತರ ಯಾರ್ಕ್‍ಷೈರ್ ಮತ್ತು ಪಶ್ಚಿಮ ಯಾರ್ಕ್‍ಷೈರ್, ದಕ್ಷಿಣಕ್ಕೆ ಮ್ಯಾಂಚೆಸ್ಟರ್ ಮತ್ತು ಮೆರ್ಸಿಸೈಡ್ ಪ್ರದೇಶಗಳಿವೆ. ಲಂಕಾಷೈರ್‍ನ ಪಶ್ಚಿಮ ತೀರಕ್ಕೆ ಐರಿಸ್ ಸಮುದ್ರವಿದೆ. ಈ ಪ್ರದೇಶದ ವಿಸ್ತೀರ್ಣ ಉತ್ತರದಿಂದ ದಕ್ಷಿಣಕ್ಕೆ 77 ಕಿಮೀ, ಪೂರ್ವದಿಂದ ಪಶ್ಚಿಮಕ್ಕೆ 64 ಕಿಮೀ.

	ವಾಯುಗುಣ: ಲಂಕಾಷೈರ್‍ನ ವಾಯುಗುಣ ಹತ್ತಿರದ ಐರಿಸ್ ಸಮುದ್ರದಿಂದ ಪ್ರಭಾವಿತವಾದದ್ದು. ಇಲ್ಲಿ ಮಂಜು ಎಲ್ಲ ಕಾಲದಲ್ಲಿಯೂ ಹೆಚ್ಚಾಗಿ ಕಂಡುಬಂದು, ಬೇಸಗೆಯಲ್ಲೂ ಬಿಸಿ ಗಾಳಿ ಕಡಿಮೆ ಪ್ರಮಾಣದಲ್ಲಿ ಬೀಸುತ್ತದೆ. ಇಲ್ಲಿಯ ಸರಾಸರಿ ಉಷ್ಣಾಂಶ ಚಳಿಗಾಲದ ಅವಧಿಯಲ್ಲಿ 20 ಸೆಂಟಿಗ್ರೇಡ್ ಇದ್ದು, ಬೇಸಗೆಯ ಅವಧಿಯಲ್ಲಿ 190 ಸೆಂಟಿಗ್ರೇಡ್‍ನಷ್ಟಿರುತ್ತದೆ. ಈ ಕೌಂಟಿಯ ಪಶ್ಚಿಮ ಭಾಗದಲ್ಲಿ ವಾರ್ಷಿಕ ಸರಾಸರಿ ಮಳೆ 890 ಮಿಮೀ. ಆದರೆ ಉತ್ತರ ಮತ್ತು ಪೂರ್ವ ಭಾಗಗಳಲ್ಲಿ 1020 ಮಿಮೀ.ಗಿಂತ ಹೆಚ್ಚು.

	ನದಿಗಳು: ಲಂಕಾಷೈರ್‍ನ ನದಿಗಳೆಲ್ಲವೂ ಪೂರ್ವದ ಪರ್ವತ ಪ್ರದೇಶಗಳಲ್ಲಿ ಹುಟ್ಟಿ ಐರಿಸ್ ಸಮುದ್ರದ ಕಡೆಗೆ ಹರಿಯುತ್ತವೆ. ಹಾಗೆಯೇ ಲೂನ್ ನದಿ ಲಂಕಾಷೈರನ್ನು ಪ್ರವೇಶಿಸಿ ಕುಂಬ್ರಿಯದಿಂದ ನೈಋತ್ಯ ಲಂಕಾಷೈರ್ ಸಮುದ್ರದ ಕಡೆಗೆ ಹರಿಯುತ್ತದೆ. ರಿಬ್ಬಲ್ ಲಂಕಾಷೈರ್‍ನ ದೊಡ್ಡನದಿ. ಇದು ಪೆನೈನ್ಸ್ ಎಂಬಲ್ಲಿ ಹುಟ್ಟಿ ಉತ್ತರ ಯಾರ್ಕ್‍ಷೈರ್ ಮುಖಾಂತರ ಲಂಕಾಷೈರ್‍ನ ನೈಋತ್ಯ ದಿಕ್ಕಿನಲ್ಲಿ ಹರಿದು ಐರಿಸ್ ಸಮುದ್ರ ಸೇರುತ್ತದೆ. ಲಂಕಾಷೈರ್‍ನ ಪ್ಲೀಟ್‍ವುಡ್ ಎಂಬುದು ಇಂಗ್ಲೆಂಡಿನಲ್ಲೇ ಅತ್ಯಂತ ಪ್ರಮುಖವಾದ ಮೀನುಗಾರಿಕೆ ಬಂದರು. ಇಲ್ಲಿಂದ ಇಂಗ್ಲೆಂಡ್‍ನ ವಾಯವ್ಯ ಭಾಗಕ್ಕೆ ಜಲಮಾರ್ಗದ ಮೂಲಕ ಮತ್ಸ್ಯವನ್ನು ಮಾರುಕಟ್ಟೆಗೆ ಪೂರೈಸಲಾಗುತ್ತದೆ.

	ವ್ಯವಸಾಯ: ಲಂಕಾಷೈರ್‍ನ ಪಶ್ಚಿಮ ಭಾಗದಲ್ಲಿ ವ್ಯವಸಾಯ ಪ್ರಮುಖವಾದದ್ದು. ಇಲ್ಲಿ ಮರ್ಸಿ ಮತ್ತು ರಿಬ್ಬಲ್ ನದಿಗಳಿವೆ. ರಿಬ್ಬಲ್ ನದಿಯ ದಕ್ಷಿಣ ಭಾಗದ ಪ್ರದೇಶ ವ್ಯವಸಾಯಕ್ಕೆ ಯೋಗ್ಯವಾಗಿದೆ. ಇಲ್ಲಿ ಕೋಸು, ಬಟಾಣಿ, ಬೀನ್ಸ್, ಟೊಮ್ಯಾಟೋ ಮುಂತಾದ ತರಕಾರಿಗಳನ್ನು ಬೆಳೆದು ಸ್ಥಳೀಯ ಮಾರುಕಟ್ಟೆಗಳಿಗೆ ಸರಬರಾಜು ಮಾಡುವರು.

	ಆರ್ಥಿಕತೆ: ಲಂಕಾಷೈರ್‍ನಲ್ಲಿ ಹಿಂದೆ ಹತ್ತಿ ಪ್ರಮುಖ ಆರ್ಥಿಕ ಬೆಳೆಯಾಗಿತ್ತು. ಆದರೆ ಜವಳಿ ಕೈಗಾರಿಕೆಗಳು ಇಳಿಮುಖಗೊಂಡ ಅನಂತರ ಹತ್ತಿಗೆ ಬದಲಾಗಿ ಕೃತಕ ನಾರನ್ನು ಉತ್ಪಾದಿಸಲಾಗುತ್ತಿದೆ. ಪ್ರೆಸ್ಟನ್‍ನಲ್ಲಿ ವಿಮಾನದ ಯಂತ್ರಗಳು ಮತ್ತು ವಿದ್ಯುತ್ ಯಂತ್ರಗಳನ್ನು ತಯಾರಿಸುವ ಕೈಗಾರಿಕೆಗಳಿದ್ದು ಇದರ ಜೊತೆಗೆ ಪ್ರಸಿದ್ಧ ಲೇಲೆಂಡ್ ಎಂಬ ಮೋಟರು ವಾಹನಗಳನ್ನು ತಯಾರಿಸುವ ಕೇಂದ್ರವಿದೆ. ಅಕ್ಕಿ ಹಿಟ್ಟಿನ ಗಿರಣಿ ಮತ್ತು ಹಾಲು ಉತ್ಪಾದನಾ ಕೈಗಾರಿಕೆಗಳಿವೆ. ಪೀಠೋಪಕರಣಗಳನ್ನು ತಯಾರಿಸುವ ಕೈಗಾರಿಕೆಗಳೂ ಕಂಡುಬರುತ್ತವೆ. ಇಲ್ಲಿಯ ಜನರನ್ನು ಲಂಕಾಷ್ಟ್ರಿಯನ್ನರು ಎಂದು ಕರೆಯುತ್ತಾರೆ. ಇಂಗ್ಲೆಂಡಿನಲ್ಲೇ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಈ ಕೌಂಟಿಯಲ್ಲಿ ಬ್ಲಾಕ್‍ಬನ್ ಬರ್ನ್‍ಲಿ ಮತ್ತು ಅಕ್ರಿಂಗ್ ಟನ್‍ಗಳು ಪ್ರಮುಖ ಕೈಗಾರಿಕಾ ನಗರಗಳು. ಬ್ಲಾಕ್‍ಪೂಲ್ ಮತ್ತು ಮೋರೆ ಕ್ಯಾಂಬೆಗಳು ಇಲ್ಲಿಯ ಪ್ರವಾಸಿ ಸ್ಥಳಗಳು. ಪ್ರೆಸ್ಟನ್ ಮತ್ತು ಲಂಕಾಷೈರ್ ಎರಡು ಮಹಾನಗರಗಳು.

	ಗಣಿಗಾರಿಕೆ: ಲಂಕಾಷೈರ್‍ನಲ್ಲಿ ಕಲ್ಲಿದ್ದಲು ಗಣಿಗಾರಿಕೆ ಪ್ರಮುಖ ವಾಗಿದ್ದು, ಇದರ ಸಮೀಪದ ಬರ್ನ್‍ಲಿ ಮತ್ತು ವೈಗಾನ್ ಬಳಿ ಕಲ್ಲಿದ್ದಲಿನ ಗಣಿಗಳಿವೆ ಮತ್ತು ಸುಣ್ಣದ ಕಲ್ಲನ್ನು ಹೊರತೆಗೆಯುವ ಗಣಿ ಕಾರ್ನ್ ಪೋರ್ಟ್‍ನಲ್ಲಿದೆ.

	ಕ್ರೀಡೆ: ಲಂಕಾಷೈರ್ ಕ್ರಿಕೆಟ್ ಆಟದಲ್ಲಿ ತುಂಬಾ ಪ್ರಸಿದ್ಧಿಯಾದದ್ದು. ಇದರ ಪೂರ್ವಭಾಗದಲ್ಲಿ ಹಲವಾರು ಕ್ರಿಕೆಟ್ ತಂಡಗಳು ಕಂಡುಬರುತ್ತವೆ. ಇದಲ್ಲದೆ ಫುಟ್‍ಬಾಲ್ ಹೆಚ್ಚು ಪ್ರಮುಖವಾಗಿದ್ದು ವೃತ್ತಿನಿರತ ಫುಟ್‍ಬಾಲ್ ತಂಡಗಳು ಬ್ಲಾಕ್‍ಪೂಲ್, ಬ್ಲಾಕ್‍ಬರ್ನ್, ಬರ್ನ್‍ಲಿ ಮತ್ತು ಪ್ರೆಸ್ಟನ್‍ಗಳಲ್ಲಿ ಕಂಡುಬರುತ್ತವೆ. ಜೊತೆಗೆ ಈಜು, ಸ್ನೂಕರ್ ಜನಪ್ರಿಯ ಕ್ರೀಡೆಗಳು.

	ಸಾರಿಗೆ ಮತ್ತು ಸಂಪರ್ಕ: ಇಲ್ಲಿ ವಿದ್ಯುತ್ ರೈಲು ಮಾರ್ಗವಿದೆ. ಇದು ಲಂಡನ್‍ನಿಂದ ಗ್ಲಾಸ್ಗೊ ಮಾರ್ಗವಾಗಿ ಹೊರಟು ಲಂಕಾಷೈರ್‍ನ ಉತ್ತರ ಭಾಗದಿಂದ ಮಧ್ಯಭಾಗದವರೆಗೆ ಸಂಪರ್ಕಕಲ್ಪಿಸುತ್ತದೆ. ಇಲ್ಲಿಯ ಬ್ಲಾಕ್‍ಪೂಲ್ ವಿಮಾನ ನಿಲ್ದಾಣ ಸಂಯುಕ್ತ ರಾಜ್ಯಗಳಿಗಲ್ಲದೆ ಯುರೋಪಿನ ನಗರಗಳಿಗೂ ಸೇವೆಯನ್ನು ಒದಗಿಸುತ್ತದೆ. ಇದಕ್ಕೆ ಹತ್ತಿರವಾಗಿ ಮ್ಯಾಂಚೆಸ್ಟರ್‍ನಲ್ಲಿ ಬಹು ದೊಡ್ಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ.

	ಇತಿಹಾಸ: ರೋಮನ್ನರ ಕಾಲದಲ್ಲಿ ಲಂಕಾಷೈರ್‍ನಲ್ಲಿ ಹೆಚ್ಚು ಜನ ವಸತಿಯಿರಲಿಲ್ಲ. ಮುಂದೆ ಕೆಲವು ಸ್ಥಳಗಳಲ್ಲಿ ಆಂಗ್ಲೊ-ಸ್ಯಾಕ್ಸನ್ನರ ವಸತಿಗಳು ತಲೆ ಎತ್ತಿದುವು. 900ರ ಸಮಯದಲ್ಲಿ ಕೆಲವರು ದಂಡೆತ್ತಿ ಹೋಗಿ ಐರಿಸ್ ಸಮುದ್ರ ಮತ್ತು ಲಂಕಾಷೈರ್‍ನ ತೀರಪ್ರದೇಶವನ್ನು ವಶಪಡಿಸಿ ಕೊಂಡಿದ್ದರು. ಅನಂತರ ಒಂದನೆಯ ವಿಲಿಯಮ್ ನಾರ್ಮಂಡಿ ಇಂಗ್ಲೆಂಡನ್ನು ವಶಪಡಿಸಿಕೊಂಡು ಲಂಕಾಷೈರ್ ಪಟ್ಟಣವನ್ನು ರೋಜರ್ ಎಂಬವನಿಗೆ ಕೊಟ್ಟ. ರೋಜರ್ ಇಲ್ಲಿ ಒಂದು ಅರಮನೆಯನ್ನು ಮತ್ತು ಸನ್ಯಾಸಿಗಳಿಗೆ ಒಂದು ಚರ್ಚನ್ನೂ ಕಟ್ಟಿಸಿದ. ಇದು ದೇಶದ ಮೊತ್ತ ಮೊದಲ ಕ್ರೈಸ್ತ ದೇವಾಲಯವಾಯಿತು.

	ರೋಜರ್‍ನ ಅನಂತರ ಮೂರನೆಯ ಎಡ್ವರ್ಡ್ ಅಧಿಕಾರಕ್ಕೆ ಬಂದು 1351ರಲ್ಲಿ ಲಂಕಾಷೈರನ್ನು ಭದ್ರಪಡಿಸಿದ. ಇವನ ಅನಂತರ ಹೆನ್ರಿ ಲಂಕಾಷೈರ್‍ಗೆ ಮೂರನೆಯ ಉತ್ತರಾಧಿಕಾರಿಯಾದ (1399). ಇವನ ಅನಂತರ ನಾಲ್ಕನೆಯ ಹೆನ್ರಿ ಅಧಿಕಾರಕ್ಕೆ ಬಂದು ದಕ್ಷತೆಯಿಂದ ಆಳಿದ.

	1500ರ ಅನಂತರ ಕೈಗಾರಿಕೆ, ವ್ಯವಸಾಯ ಮತ್ತು ಗಣಿಗಾರಿಕೆ ಮುಂತಾದ ಆರ್ಥಿಕ ಚಟುವಟಿಕೆಗಳು ಅಭಿವೃದ್ಧಿ ಹೊಂದಿ, ಅನೇಕ ವಸತಿಗಳು ನಿರ್ಮಾಣಗೊಂಡವು. 1600ರ ಅಂತರ್ಯುದ್ಧದಿಂದ ಲಂಕಾ ಷೈರ್‍ನ ರಾಜಕೀಯ ಬದಲಾಯಿತು. ಇಲ್ಲಿ ರೋಮನ್ ಕೆಥೊಲಿಕರ ಪ್ರಭಾವ ಹೆಚ್ಚಾಗಿದ್ದು ಇವರ ಆಡಳಿತವನ್ನು ಕೆಲವರು ವಿರೋಧಿಸುತ್ತಿದ್ದರು. 1700ರ ಮಧ್ಯದ ಅವಧಿಯಲ್ಲಿ ಅನೇಕ ಹೊಸ ಕೈಗಾರಿಕೆಗಳು ಸ್ಥಾಪನೆ ಯಾದುವು. ಅದರಲ್ಲೂ ಬಟ್ಟೆ ಮತ್ತು ಲೋಹದ ಕೈಗಾರಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದುವು.
	
(ಡಿಒ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ